Friday 29 December 2017

ಕನ್ನಡ ಕವಿಗಳ ನುಡಿಮುತ್ತು ಗಳು. ಕನ್ನಡ ಸುಭಾಷಿತಗಳು kannada kavigala nudimuttugalu

ಕನ್ನಡ ಕವಿಗಳ ನುಡಿಮುತ್ತುಗಳು


卐 ' ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ - ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ , ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು.ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ , ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. '
------------------------------------ ಕುವೆಂಪು.


卐 " ನನ್ನ ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ.ನಾನು ಕಾಲೇಜಿಗೆ ಹೋದಾಗ ಎಲ್ಲರಿಗಿಂತ ಉತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಿದ್ದೆ.ನಾನು ಕನ್ನಡ ಮಾಧ್ಯಮದಲ್ಲಿಯೇ ಓದಬೇಕು , ಉತ್ತಮವಾಗಿ ಇಂಗ್ಲೀಷ್ ಮಾತನಾಡಬೇಕು ಎನ್ನುವುದು ತಂದೆಯ ಆಶಯವಾಗಿತ್ತು. ಆದರೆ ಇಂದು ಅತ್ತಕಡೆ ಇಂಗ್ಲೀಷ್ ಬಾರದೆ ಇತ್ತಕಡೆ ಕನ್ನಡವೂ ತಿಳಿಯದಿರುವ ಕಾಲದಲ್ಲಿ ನಾವಿದ್ದೇವೆ.ಉತ್ತಮ ಇಂಗ್ಲೀಷ್ ಹೇಳಿಕೊಡುವ , ಕನ್ನಡವನ್ನು ಕಲಿಸುವ ಶಿಕ್ಷಣ ನಮಗೆ ಬೇಕಾಗಿದೆ."
------------------------ಪ್ರೊಫೆಸರ್. ಸಿ.ಎನ್.ಆರ್.ರಾವ್.


卐 "ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮಿತಿಯನ್ನು ಅರಿತು, ತನ್ನ ತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಸಹಕರಿಸಲು ಕಲಿಸುವುದೇ ನಿಜವಾದ ಸಂಸ್ಕೃತಿಯ ಲಕ್ಷಣ. "
----------------------ಎಂ.ಗೋಪಾಲಕೃಷ್ಣ ಅಡಿಗ.

卐 " ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ.ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು ? ಅವರವರ ಸ್ವಂತ ಅನುಭವವೆ !"
----------------ಜಿ.ಪಿ.ರಾಜರತ್ನಂ.


卐 "ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ ।
ಪೆಣ್ಣಲ್ಲವೆ ಪೊರೆದವಳು ।
ಪೆಣ್ಣುಪೆಣ್ಣೆಂದೇತಕೆ ಬೀಳುಗಳೆವರು ।
ಕಣ್ಣು ಕಾಣದ ಗಾವಿಲರು ।"
----------------------- ಸಂಚಿಯ ಹೊನ್ನಮ್ಮ.

卐 " ಆಡದೇ ಮಾಡುವವ ರೂಢಿಯೊಳಗುತ್ತಮನು , ಆಡಿ ಮಾಡುವವ ಮಧ್ಯಮನು , ಆಡಿಯೂ ಮಾಡದವ ಅಧಮನು "
--------------------------ಸರ್ವಜ್ಞ.

卐 "ಇತಿಹಾಸವೆಂಬುದು ಕೇವಲ ರಾಜ ರಾಣಿಯರ ಕಥೆಯಲ್ಲ , ಕಾಲಕಾಲಕ್ಕೆ ಬದಲಾಗುತ್ತಾ ಬಂದ ಬದುಕು.ಅದರ ಕಾಲಧರ್ಮ , ಅದರಿಂದ ಪ್ರಭಾವಿತರಾದ ಜನರ ರೀತಿನೀತಿಗಳು , ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು - ಇವೆಲ್ಲಾ ಇತಿಹಾಸವನ್ನು ಬಿಂಬಿಸುವ ಮುಖ್ಯ ಅಂಶಗಳಾಗಿವೆ. ಸಾಮ್ರಾಜ್ಯಗಳು ಎದ್ದು ಬಿದ್ಧ ಉತ್ಕರ್ಷ - ಅಧಃಪತನಗಳಿಗೆ ಯಾವನೋ ರಾಜ , ಒಬ್ಬಳು ರಾಣಿ ಕಾರಣವೆನ್ನುವುದು ಸರಿಯಾಗದು. ಆ ಸೃಷ್ಟಿ , ಲಯದ ಹಿಂದೆ ಆಯಾ ಜನಾಂಗಗಳ ಕಥೆಯಿದೆ.ಈ ಘಟನೆಗಳ ಹಿಂದೆ ಜನಜೀವನ, ಕಲೆ , ಸಂಸ್ಕೃತಿಗಳ ಪ್ರೇರಕ ಶಕ್ತಿಗಳಿವೆ."
----------------------------ನಿರಂಜನ.


卐 ಕನ್ನಡದ ಸೊಗಸು
' ಮಲ್ಲಿಗೆಗೆ ಹುಳಿಯಕ್ಕು , ಕಲ್ಲಿಗೆ ಗಂಟಕ್ಕು
ಹಲ್ಲಿಗೆ ನೊಣವು ಸವಿಯಕ್ಕು - ಕನ್ನಡದ
ಸೊಲ್ಲುಗಳ ನೋಡಿ ಸರ್ವಜ್ಞ. '
--------------------------- ಸರ್ವಜ್ಞ.

卐 " ಹಲವು ಹಳ್ಳಗಳು ಹರಿದು ಬಂದು ಸಮುದ್ರವಾಗುವಂತೆ , ಕೆಲವನ್ನು ತಿಳಿದವರಿಂದ ಕಲಿತು , ಕೆಲವನ್ನು ಶಾಸ್ತ್ರಗಳನ್ನು ಕೇಳುತ್ತಾ , ಕೆಲವನ್ನು ಮಾಡುವವರನ್ನು ಕಂಡು, ಕೆಲವನ್ನು ಎಚ್ಚರದಿಂದ ನೋಡುತ್ತಾ , ಕೆಲವನ್ನು ಸಜ್ಜನರ ಸಹವಾಸದಿಂದ ತಿಳಿದರೆ ಮನುಷ್ಯ ಸರ್ವಜ್ಞನಾಗುತ್ತಾನೆ".
------------------------ಪುಲಿಗೆರೆ ಸೋಮೇಶ್ವರ.

卐 ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ? ನೀನದನ್ನ
ನವಶಕ್ತಿಯನೆಬ್ಬಿಸು -
ಹೊಸಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು ॥
--------------------ಎಂ.ಗೋವಿಂದ ಪೈ.

卐 ಬೇರೆಯವರ ವಿಚಾರಗಳನ್ನು, ಬೇರೆಯವರ ಧರ್ಮವನ್ನು ಸಹಿಸಿಕೊಂಡು ಬಾಳಲು ಸಾಧ್ಯವಾದಲ್ಲಿ ಅದು ಕಸವರ ( ಚಿನ್ನ, ಸಂಪತ್ತು). ಹೀಗಲ್ಲದೆ ಕಸ ಮತ್ತು ಕಸವರ ಎರಡೂ ಒಂದೇ ಎಂದು ತಿಳಿದವರು ದುಃಖವನ್ನು ಅನುಭವಿಸುತ್ತಾರೆ.
-------------------ಶ್ರೀ ವಿಜಯ .


卐 ದುಃಖಕ್ಕೆ ಸಿಕ್ಕಷ್ಟು ಬೇಗ ಕಾರಣ ಸುಖಕ್ಕೆ ಸಿಗುವುದಿಲ್ಲ.
--------------------' ಪಿ.ಲಂಕೇಶ್.


卐 " ಬಂದ ಸುಖವ ಬಿಡಬೇಡ , ಬಾರದುದ ಬೇಕೆಂದು ಬಯಸಬೇಡ."
------------------------------ರತ್ನಾಕರ ವರ್ಣಿ.

卐 ಜೀವನ ಸುಂದರ ಸ್ವಪ್ನವೂ ಅಲ್ಲ, ಕಹಿ ಬೇವು ಅಲ್ಲ ; ಬೇವು - ಬೆಲ್ಲಗಳ ಮಿಶ್ರಣ ಅದು.ಅರೆ ಕಹಿ, ಅರೆ ಸಿಹಿ ,ಸ್ವಲ್ಪ ನಗು ,ಕೊಂಚ ಅಳು; ತುಸು ಕೋಪ , ನಸು ತಾಪ. ನೀನದನ್ನು ನಗುನಗುತ್ತ ನುಂಗಬೇಕು, ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು.
-----------------------------ನಾಡಿಗೇರ್ ಕೃಷ್ಣರಾಯರು.



卐 " ನಡೆವವರು ಎಡವದೆ ಕುಳಿತವರು ಎಡವುತ್ತಾರೆಯೆ?"
------------------------ರಾಘವಾಂಕ.


卐 " ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ,ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ. "
---------------------ಮಾಸ್ತಿ ವೆಂಕಟೇಶ ಅಯ್ಯಂಗಾರ್ .

卐 ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ?
ಸಮುದ್ರದ ತಡಿಯಲೊಂದು ಮನೆಯಮಾಡಿ ನೊರೆತೆರೆಗಳಿಗೆ ಅಂಜಿದೊಡೆ ಎಂತಯ್ಯ ?
ಸಂತೆಯೊಳಗೆ ಒಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆ ಎಂತಯ್ಯ?
ಲೋಕದಲ್ಲಿ ಹುಟ್ಟಿಬಂದ ಬಳಿಕ ಸ್ತುತಿ - ನಿಂದೆಗಳು ಬಂದೊಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
----------------ಅಕ್ಕ ಮಹಾದೇವಿ.

卐 'ಎಲ್ಲರೂ ತಮ್ಮ ತಮ್ಮ ಬುದ್ಧಿಗೆ ತೋಚಿದ್ದನ್ನು , ತಮಗೆ ಉತ್ತಮವೆಂದು ತೋರಿದ ಕ್ರಮದಲ್ಲಿ ಚೆನ್ನಾಗಿಯೇ ಹೇಳುತ್ತಾರೆ.ವಿದ್ಯೆ ಲೋಕದಲ್ಲಿ ಯಾರೋ ಒಬ್ಬರಿಗಾಗಿ ಬಂದುದಲ್ಲ.ಲೋಕವನ್ನು ಮೆಚ್ಚಿಸಲು ಪರಮೇಶ್ವರನಿಗಾದರೂ ಸಾಧ್ಯವೆ ? ಆಡುವವರು ತಮ್ಮ ಹಮ್ಮಿಗಾಗಿ ಆಡುತ್ತಾರೆ. ಕೆಟ್ಟ ಮಾತಿನ ಭಯದಿಂದ ಕೆಟ್ಟವನ ಮೇಲೆ ಏಕೆ ಅನುಮಾನ ಪಡಬೇಕು ? '
----------------------ಚೌಂಡರಸ.

4 comments:

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು